ತಾಳಗುಂದ -
	ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಗ್ರಾಮ.  ಬಳ್ಳಿಗಾಮಿಯ ಈಶಾನ್ಯಕ್ಕೆ ಸುಮಾರು 2 ಕಿಮೀ. ದೂರದಲ್ಲಿದೆ.  ಜನಸಂಖ್ಯೆ 1,828 (2001).  ಶಾಸನಗಳಲ್ಲಿ ಇದನ್ನು ಸ್ಥಾನ ಕುಂದೂರ, ಸ್ಥಾನಕುಂದೂರ್, ತಾಣಗುಂದೂರ್, ಟಾಣಕುಂದೂರ್ ಎಂದು ಮುಂತಾಗಿ ವರ್ಣಿಸಲಾಗಿದೆ.  ಹಿಂದೆ ಇದೊಂದು ಅಗ್ರಹಾರವಾಗಿತ್ತೆಂದೂ ಅಹಿಚ್ಛತ್ರದಿಂದ ತ್ರಿನೇತ್ರ ಅಥವಾ ಮುಕ್ಕಣ್ಣ ಕದಂಬ ಕರೆತಂದ ಬ್ರಾಹ್ಮಣರು ಇಲ್ಲಿ ವಾಸಿಸುತ್ತಿದ್ದರೆಂದೂ ಹೇಳಲಾಗಿದೆ.  ಇದನ್ನು ಅನಾದಿ ಅಗ್ರಹಾರವೆಂದೂ ವರ್ಣಿಸಲಾಗಿದೆ.  ವೇದ, ವ್ಯಾಕರಣ, ವೇದಾಂತ ಮುಂತಾದವುಗಳ ಅಧ್ಯಯನಕ್ಕಾಗಿ ಕೇಶವದಂಡನಾಯಕ (12 ನೆಯ ಶತಮಾನ) ಈ ಊರಿನ ಬಳಿಯ ಬಯಲನ್ನು ದತ್ತಿ ಬಿಟ್ಟಿದ್ದ.  ತಾಳಗುಂದ ಅಗ್ರಹಾರದಲ್ಲಿ ಆರು ಉಪಾಧ್ಯಾಯರೂ ನಲವತ್ತೆಂಟು ವಿದ್ಯಾರ್ಥಿಗಳೂ ಇದ್ದರೆಂಬುದಾಗಿ 12ನೆಯ ಶತಮಾನದ ಇನ್ನೊಂದು ಶಾಸನದಿಂದ ತಿಳಿದುಬರುತ್ತದೆ.  ಈ ಊರಿನ ಅತ್ಯಂತ ಪ್ರಾಚೀನ ದೇವಾಲಯವಾದ ಪ್ರಣವೇಶ್ವರ ಗುಡಿಯಲ್ಲಿ ಸಪ್ತದಿವ್ಯಗಳು ನಡೆಯುತ್ತಿದ್ದುವೆಂದೂ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅರವಟ್ಟಗೆಗಳಿದ್ದುವೆಂದೂ ಶಾಸನಗಳು ತಿಳಿಸುತ್ತವೆ.  ಪ್ರಣವೇಶ್ವರ ದೇವಾಲಯ ಪ್ರಾಚೀನವಾದ್ದೆಂಬುದು ಶಾಂತಿವರ್ಮನ ಸು. 450ರ ಪ್ರಸಿದ್ಧವಾದ ಸ್ತಂಭಶಾಸನದಿಂದ ಗೊತ್ತಾಗುತ್ತದೆ.  ಕರ್ನಾಟಕದಲ್ಲಿ ಉಳಿದುಬಂದಿರುವ ದೇವಾಲಯಗಳಲ್ಲೆಲ್ಲ ಇದು ಅತ್ಯಂತ ಪ್ರಾಚೀನವಾದ್ದು.  ಶಾತಕರ್ಣಿಗಳೂ ಇಲ್ಲಿಯ ಪ್ರಣವೇಶ್ವರ ಲಿಂಗವನ್ನು ಆರಾಧಿಸುತ್ತಿದ್ದರೆಂದು ಶಾಸನ ತಿಳಿಸುತ್ತದೆಯಾದ್ದರಿಂದ ಇದರ ಕಾಲವನ್ನು ಸು. 2-3ನೆಯ ಶತಮಾನದ ವರೆಗೂ ಹಿಂದೂಡಬಹುದು.  ಈ ದೇವಾಲಯದ ಒಳಭಾಗ ಹೋಮದೀಕ್ಷಾಪರರಾದ ಬ್ರಾಹ್ಮಣರ, ಸ್ನಾತಕರ ವೇದಘೋಷದಿಂದ ತುಂಬಿಹೋಗಿತ್ತೆಂದು ಶಾಸನ ಬಣ್ಣಿಸುತ್ತದೆ.

	ಪ್ರಣವೇಶ್ವರ ದೇವಲಾಯದ ಮೂಲಕಟ್ಟಡ ಚತುರಸ್ರಾಕಾರವಾದ್ದು.  ಅದರ ಭಿತ್ತಿಯ ಹೊರ-ಒಳಭಾಗಗಳು ತೀರ ಸರಳ.  ಒಳಭಾಗದ ಮೂಲೆಯಲ್ಲಿ ಸರಳವಾದ ಅರ್ಧಸ್ತಂಭಗಳೂ ಅವುಗಳ ಮಧ್ಯ ಸಮಕೋನದ ಸ್ತಂಭಿಕೆಗಳೂ ಇವೆ.  ಚಾವಣಿಯಲ್ಲಿ ಮೂರು ಚತುರಸ್ರಗಳನ್ನು ಒಂದರಮೇಲೊಂದು ಇಟ್ಟಂತಿದೆ. ಅದರ ಮುಚ್ಚಿಗೆ ಕಲ್ಲಿನ ಮೇಲೆ 2" ಆಳವಾದ ಸರಳವಾದ ಪದ್ಮ ವಿನ್ಯಾಸವನ್ನು ಕೆತ್ತಲಾಗಿದೆ.  18"  ವ್ಯಾಸದ 3 ಅಡಿ ಎತ್ತರದ ಭವ್ಯವಾದ ಪ್ರಣವೇಶ್ವರ ಲಿಂಗ ದೊಡ್ಡ ಪೀಠದ ಮೇಲಿದೆ.  ಪೀಠದ ಪ್ರಣಾಳ ಸುಮಾರು 2 1/2  ಅಡಿ ಉದ್ದವಾಗಿದೆ.  ಇದನ್ನು ಮೂರ್ತಿಭಂಜಕರು ಒಂದರೆಡು ಬಾರಿ ಒಡೆದು ಹಾಕಿದ್ದುಂಟು.  ಇದನ್ನು ಈಗ ಪುರಾತತ್ವ ಇಲಾಖೆಯವರು ಜೀರ್ಣೋದ್ಧಾರ ಮಾಡಿದ್ದಾರೆ.

	ಗರ್ಭಗೃಹದ್ವಾರದ ಮೇಲ್ಭಾಗದಲ್ಲಿರುವ ಫಲಕಕ್ಕೆ ಆಧಾರವಾಗಿ ಎರಡು ಕಂಬಗಳನ್ನು ನಿಲ್ಲಿಸಲಾಗಿದೆ.  ಇವುಗಳಲ್ಲಿ ಒಂದು ಅಷ್ಟಕೋನದ್ದಾಗಿದ್ದರೆ ಇನ್ನೊಂದು ಹದಿನಾರು ಕೋನದ್ದಾಗಿದೆ.  ಈ ಸ್ತಂಭಗಳ ತುದಿಯಲ್ಲಿ ಕಲಶಾ ಕೃತಿಯ ರಚನೆಗಳುಂಟು.  ಈ ಕಂಬಗಳ ಮುಂಭಾಗದಲ್ಲಿ ಬಾಗಿಲು ಚೌಕಟ್ಟನ್ನಿಡಲಾಗಿದೆ.  ಇದರ ಲಲಾಟಬಿಂಬದ ಮೇಲೆ ಗಣೇಶನ ವಿಗ್ರಹವನ್ನೂ ದ್ವಾರ ಪಟ್ಟಿಕೆಗಳ ಮೇಲೆ ಪುಷ್ಪಾಲಂಕರಣಗಳನ್ನೂ ಚಿತ್ರಿಸಲಾಗಿದೆ.  ಕೆಳಭಾಗದಲ್ಲಿ ಕದಂವ ಮೃಗೇಶವರ್ಮನ ರಾಣಿಯಾದ ಪ್ರಭಾವತಿಯ ಶಾಸನವಿದೆ.  ಆದ್ದರಿಂದ ಈ ಭಾಗ ಕದಂಬರ ಕಾಲದ್ದೆಂದು ಹೇಳಬಹುದು.

	ಮೂಲ ಚತುರಸ್ರಾಕಾರದ ಗರ್ಭಗೃಹಕ್ಕೆ ಕಾಲಕ್ರಮದಲ್ಲಿ ಮುಖಮಂಟಪವನ್ನು ಸೇರಿಸಿದ್ದು ಕಂಡುಬರುತ್ತದೆ.  ಬಿಜ್ಜಳ ಕಳಚೂರ್ಯರ ಕಾಲದ ಶಾಸನ ಶಿಲೆಯನ್ನು ಇದರ ಚಾವಣಿಗಾಗಿ ಉಪಯೋಗಿಸಲಾಗಿದೆ.  ಈ ಭಾಗವೆಲ್ಲ ಭಗ್ನವಾಗಿತ್ತು.  ಇತ್ತೀಚೆಗೆ ಇಡೀ ಗುಡಿಯ ಜೀರ್ಣೋದ್ಧಾರ ಮಾಡಲಾಗಿದೆ.

	ಪ್ರಣವೇಶ್ವರ ದೇವಲಾಯದ ಮುಂದೆ (ಸುಮಾರು 20 ಗಜ ದೂರದಲ್ಲಿ) ಕದಂಬ ಶಾಂತಿವರ್ಮನ ಶಾಸನಸ್ತಂಭವನ್ನು ನಿಲ್ಲಿಸಲಾಗಿದೆ. ಸ್ತಂಭದ ಪೀಠ ಭಾಗದ ಉದ್ದ 5' 4".  ಅಷ್ಟ ಕೋನಾಕಾರದ ಮೇಲ್ಭಾಗ 1' 4"  ಚದರವಾಗಿದೆ. ಸ್ತಂಭದ ಒಟ್ಟು ಎತ್ತರ 6' 4".   ಇದರ ಎಂಟು ಮುಖಗಳ ಪೈಕಿ ಏಳರ ಮೇಲೆ ಶಾಸನದ ತಲಾ ಎರಡೆರಡು ಸಾಲುಗಳಿವೆ. ಎಂಟನೆಯ ಮುಖದ ಮೇಲೆ ಪುಟ್ಟ ಪಂಕ್ತಿಯೊಂದುಂಟು.  ಈ ಶಾಸನವನ್ನು ಕೆಳಗಿನಿಂದ ಮೇಲಕ್ಕೆ ಬರೆಯಲಾಗಿರುವುದು ಗಮನಾರ್ಹ. ಇದು 3/4” ( 2 1/2” ಗಾತ್ರದ ಸುಂದರ ಪೇಟಿಕಾಶಿರ ಲಿಪಿಯಲ್ಲಿದೆ.  ಶಾಸನದ ಬಹುತೇಕ ಅಕ್ಷರಗಳು ಸ್ಪಷ್ಟವಾಗಿವೆ. ಅಕ್ಷರಗಳು ಕಲಾತ್ಮಕವಾಗಿಯೂ ಪ್ರಮಾಣಬದ್ಧವಾಗಿಯೂ ಇವೆ.   ಇದನ್ನು 1894ರಲ್ಲಿ ಕಂಡುಹಿಡಿದು ಪ್ರಕಟಿಸಿದವರು ಬಿ.ಲೂಯಿ ರೈಸ್.  ಇದುವರೆಗೆ ದೊರೆತಿರುವ ಕರ್ನಾಟಕ ಶಾಸನಗಳ ಪೈಕಿ ತಾಳಗುಂದ ಸ್ತಂಭಶಾಸನ ಪ್ರಮುಖವಾದ್ದು.

	ಈ ಶಾಸನ ಯಾರದೆಂಬುದರಲ್ಲಿ ಏಕಭಿಪ್ರಾಯವಿಲ್ಲ.  ಕೀಲ್ ಹಾರ್ನ್, ಸಿವೆಲ್, ರ್ಯಾಪ್ಸನ್, ಎನ್, ಲಕ್ಷ್ಮೀನಾರಾಯಣರಾವ್, ಆರ್. ಎಸ್. ಪಂಚಮುಖ ಮುಂತಾದವರ ಪ್ರಕಾರ ಈ ಶಾಸನ ಕದಂಬ ಕಾಕುಸ್ಥ ವರ್ಮನದು. ಬ್ಯೂಲರ್, ರೈಸ್, ಜೆ.ಎಫ್. ಫ್ಲೀಟ್, ಎಂ.ಎಚ್. ಕೃಷ್ಣ, ನೀಲಕಂಠ ಶಾಸ್ತ್ರೀ, ಡಿ.ಸಿ.ಸರ್ಕಾರ್ ಮೊದಲಾದವರು ಇದು ಶಾಂತಿವರ್ಮನದೆಂದೂ ಜಿ.ಎಸ್.ಗಾಯಿಯವರು ಕಾಕಸ್ಥ ವರ್ಮ-ಶಾಂತಿವರ್ಮನ ಕಾಲದ್ದೆಂದೂ ಹೇಳಿದ್ದಾರೆ.  ಲಿಪಿಲಕ್ಷಣ, ಭಾಷಾಪ್ರಯೋಗ, ಐತಿಹಾಸಿಕ ರಾಜಕೀಯ ವಿಷಯ ನಿರೂಪಣೆ ಮುಂತಾದವುಗಳ ದೃಷ್ಟಿಯಿಂದ ಇದು ಸು.450ರ ಶಾಸನವೆಂದು ಹೇಳಬಹುದು.   ಈ ಶಾಸನದ ಕರ್ತೃವಾದ ಕವಿ ಕುಬ್ಜ ಕನ್ನಡಿಗ.  ಈತ ಕಾಕುಸ್ಥನ ಮಗ ಶಾಂತಿವರ್ಮನ ಆಳ್ವಿಕೆಯಲ್ಲಿ ಮಾನ್ಯತೆ ಪಡೆದ ವಿದ್ವತ್ಕವಿಯಾಗಿದ್ದಿರಬಹುದು.

ಕನ್ನಡ ನಾಡಿನ ಪ್ರಪ್ರಥಮ ರಾಜವಂಶÀವಾದ ಕದಂಬ ಕುಲದ ಸ್ಥಾಪನೆ, ಶಾಂತಿವರ್ಮನ ವರೆಗಿನ ವಂಶಾವಳಿಯ ವಿಚಾರ, ಗುಪ್ತರಿಗೂ ಕದಂಬರಿಗೂ ಸಂಬಂಧವೇರ್ಪಟ್ಟ ವಿಚಾರ, ಆ ಕಾಲದ ವೈದಿಕ ಧರ್ಮದ ಸ್ವರೂಪ, ವಿದ್ಯಾಭ್ಯಾಸ ಪದ್ಧತಿ ಮುಂತಾದ ಸಂಗತಿಗಳನ್ನೊಳಗೊಂಡ ತಾಳಗುಂದ ಸ್ತಂಬಶಾಸನದ ಮುಖ್ಯ ಉದ್ದೇಶ ಕದಂಬ ಕಾಕುಸ್ಥವರ್ಮ ತಾಳಗುಂದದಲ್ಲಿ ಬಹು ಪ್ರಾಚೀನ ಕಾಲದಿಂದ ಪ್ರಸಿದ್ಧವಾಗಿದ್ದ ಪ್ರಣವೇಶ್ವರಸ್ವಾಮಿ ದೇವಾಲಯದ ಉಪಯೋಗಕ್ಕೆಂದು ಕೆರೆಯೊಂದನ್ನು ತೋಡಿಸಿದ ವಿಷಯವನ್ನು ತಿಳಿಸುವುದಾಗಿದೆ.  ಹೀಗೆ ಇದು ಕಾಕುಸ್ಥನ ಗುಣಕಾರ್ಯಗಳನ್ನು ಬಣ್ಣಿಸುವ ಒಂದು ಪ್ರಶಸ್ತಿಪರ ಶಾಸನ. 

	ಒಟ್ಟು 34 ಪದ್ಯಗಳಿರುವ ಈ ಪದ್ಯಶಾಸನದಲ್ಲಿ ಕೆಲವು ಅಪೂರ್ವ ಛಂದಸ್ಸುಗಳನ್ನು ಬಳಸಲಾಗಿದೆ.  ಪದ್ಯ 1ರಿಂದ 24 ರ ವರೆಗೆ ಬಳಸಿದ ಅಪೂರ್ವ ಛಂದಸ್ಸು ಮಾತ್ರಾಸಮಕವಿಶೇಷವೆಂದು ಕೀಲ್‍ಹಾರ್ನ್, ಮಿಶ್ರಗಣ ಗೀತಿಕೆ ಎಂದು ವೆಂಕಟಸುಬ್ಬಯ್ಯ ಹೇಳಿದ್ದಾರೆ.  ಇದಲ್ಲದೆ ಪ್ರಾಚೀನ ಕನ್ನಡ ಕವಿಗಳಿಗೆ ಪರಿಚಿತವಾಗಿದ್ದ ಶಾರ್ದೂಲವಿಕ್ರೀಡಿತ, ವಸಂತತಿಲಕ, ಪುಷ್ಟಿತಾಗ್ರ , ದಂಡಕ ಮುಂತಾದ ಛಂದಸ್ಸುಗಳನ್ನು ಯಥೋಚಿತವಾಗಿ ಬಳಸಲಾಗಿದೆ.  ಈ ಶಾಸನದ ಭಾಷೆ ಸಂಸ್ಕøತ, ಇದರದು ಪ್ರೌಢವೂ ಕಾವ್ಯಮಯವೂ ಆದ ಶೈಲಿ. ಸೊಗಸಾದ ಪದಮೈತ್ರಿ.  ಮನೋಹರವಾದ ಶಬ್ದಾಲಂಕಾರ ವೈಚಿತ್ರ್ಯ.  ರೂಪಕ, ಉಪಮಾದಿ ಅರ್ಥಾಲಂಕಾರಗಳ ಉಚಿತ ಬಳಕೆ ಅಲ್ಲಲ್ಲಿ ಕಂಡುಬರುತ್ತದೆ. 

	ತಾಳಗುಂದದ ಗಂಗಾಧರೇಶ್ವರ ಹಾಗೂ ವೀರಭದ್ರ ಗುಡಿಗಳಲ್ಲೂ ಶಿಲಾ ಶಾಸನಗಳುಂಟು.  ಈ ಊರಿನ ಪೂರ್ವಕ್ಕೆ ದೊಡ್ಡ ಗುಡ್ಡವೊಂದಿದೆ.  ಅದನ್ನು ದೊಣನಗುಡ್ಡ ಎಂದು ಕರೆಯುತ್ತಾರೆ.  ಮಹಾಭಾರತದ ಭೀಮ ಬಕಾಸುರನನ್ನು (ದೊಣ) ಈ ಗುಡ್ಡದ ಮೇಲೆ ಕೊಂದನೆಂಬುದು ಸ್ಥಳಪುರಾಣ.  ಇಲ್ಲಿಯೇ ಮಹಾಭಾರತದ ಏಕಚಕ್ರನಗರವಿತ್ತೆಂದೂ ಪ್ರತೀತಿ.  ಅದೇನಿದ್ದರೂ ಈ ಗುಡ್ಡದಲ್ಲಿ ಕೆಲವೆಡೆ ಪುರಾತನವಾದ ಭಗ್ನಮೂರ್ತಿಗಳೂ ದೊಡ್ಡ ಇಟ್ಟಿಗೆಯ ಚೂರುಗಳೂ ಕಾಣಸಿಗುತ್ತವೆ. 						   (ಎಚ್.ಆರ್.ಆರ್.ಬಿ)

ಇತ್ತೀಚಿಗೆ ಕೇಂದ್ರ ಪುರಾತತ್ವ ಇಲಾಖೆ ಉತ್ಖನನ  ನಡೆಸಿದಾಗ ಹಲ್ಮಿಡಿ ಶಾಸನಕ್ಕಿಂತ ಪೂರ್ವದ ಕನ್ನಡ ಹಾಸನ ದೊರಕಿರುವುದಾಗಿ ASI ಪ್ರಕಟಿಸಿದೆ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ